ಅಧ್ಯಕ್ಷರ ಮಾತು

Vipra Souharda Directors
ಎಸ್.ಎ. ನಾರಾಯಣ ಮೂರ್ತಿ 

‘ಸಹಕಾರದಿಂದ ಸಮೃದ್ಧಿ’ ಎಂಬಮಾತು ನಿತ್ಯಸತ್ಯ. ನಾನು ನನ್ನ ವೃತ್ತಿ ಮತ್ತು ಸಾಮಾಜಿಕ ಜೀವನದುದ್ದಕ್ಕೂ ವಿವಿಧ ಹಂತಗಳಲ್ಲಿ, ವಿಭಿನ್ನ ರೀತಿಗಳಲ್ಲಿ ಸಹಕಾರ ತತ್ವಗಳಡಿಯಲ್ಲಿ ಹಲವು ಸಾಮಾಜಿಕ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಮತ್ತು ಆ ಸಂಸ್ಥೆಗಳು ತಾವಾಗಿಯೇ ಅಭಿವೃದ್ಧಿ ಪಥದಲ್ಲಿ ಮುಂದುವರಿದುಕೊಂಡು ಹೋಗುವಂತಾಗಲು ಪ್ರಯತ್ನಿಸಿದ್ದೇನೆ.  ‘ಸಹಕಾರ’ ನಮ್ಮಜೀವನದ, ಸಮಾಜದ ಅವಿಭಾಜ್ಯ ಅಂಗ.  ಅದು ಯಾವ ರೀತಿಯಲ್ಲೂ ಇರಬಹುದು. ಒಂದು ಸಣ್ಣ ಕುಟುಂಬ ಯಶಸ್ವಿಯಾಗಿ ಜೀವನ ಸಾಗಿಸುವುದರಿಂದ ಹಿಡಿದು ಇಡೀ ಜಗತ್ತೇ ಪ್ರಗತಿ ಪಥದಲ್ಲಿ ಮುಂದುವರಿದು ಜಾಗತಿಕ ಯಶಸನ್ನು  ಕಾಣಬೇಕಾದರೆ ವ್ಯಕ್ತಿ-ವ್ಯಕ್ತಿಗಳ ನಡುವೆ, ದೇಶ ದೇಶಗಳ ನಡುವೆ ಸಹಕಾರಬೇಕು. ಇಂದಿನ ಆಧುನಿಕ ಯುಗದಲ್ಲಿ ಒಂದು ಮುಂದುವರಿದ ಸಮಾಜವಾಗಿ ನಾವೆಲ್ಲರೂ ಬೆಳೆಯಬೇಕಾದರೆ ಸಹಕಾರ ಮತ್ತು ಸಹಯೋಗ ಅತ್ಯಂತ ಮುಖ್ಯ.

ಸಹಕಾರ ಮತ್ತು ಸಹಯೋಗ ಎಂದಾಗ ಅದರಲ್ಲಿ ಆರ್ಥಿಕ ಸಹಯೋಗ ತುಂಬಾ ಮಹತ್ವದ್ದು.  ಹಿಂದಿನ ದಿನಗಳಲ್ಲಿ, ನಮ್ಮಂತಹ ಸಹಕಾರಿ ಸಂಸ್ಥೆಗಳು ಹುಟ್ಟುವ ಮೊದಲು, ಸಮಾಜದ ಆರ್ಥಿಕವಾಗಿ ಸಬಲರಲ್ಲದ ಸಾಮಾನ್ಯ ಜನರು ತಮ್ಮ ಆರ್ಥಿಕ ಅವಶ್ಯಕತೆಗಳಿಗಾಗಿ ಖಾಸಗಿ ಲೇವಾದೇವಿದಾರರ ಬಳಿ ಹೋಗಬೇಕಾಗಿತ್ತು, ಮತ್ತು ಲೇವಾದೇವಿದಾರರು ವಿಧಿಸುವ ಕಠಿಣ ಕಟ್ಟುನಿಟ್ಟುಗಳಿಗೆ ತಲೆಬಾಗಬೇಕಿತ್ತು. ಅಂತಹ ಪರಿಸ್ಥಿತಿಯಲ್ಲಿ ಸಿಕ್ಕಿ ಅತಿ ಹೆಚ್ಚು ದರದ ಬಡ್ಡಿಯನ್ನು ಪಾವತಿ ಮಾಡಲಾಗದೆ ಅಸ್ತಿ-ಪಾಸ್ತಿ ಕಳೆದುಕೊಂಡವರನ್ನು ನಾವು ನೋಡಿದ್ದೇವೆ.  ನಮ್ಮಸಹಕಾರಿ ಸಂಸ್ಥೆ ಇಂತಹ ಸಾಮಾಜಿಕ ಪರಿಸ್ಥಿತಿಗೆ ಪರ್ಯಾಯ ವ್ಯವಸ್ಥೆ.  ಯಾರು ತಮ್ಮ ಜೀವನದ ಪ್ರಾಮಾಣಿಕ, ಸಹಜ ಕನಸುಗಳನ್ನು ಸಾಕಾರಗೊಳಿಸಲು ಆರ್ಥಿಕವಾಗಿ ಸಶಕ್ತರಾಗಿಲ್ಲವೋ ಅಂತಹವರಿಗೆ ನಮ್ಮ ಸಂಸ್ಥೆ ಸಮಯೋಚಿತ, ಅವಶ್ಯಕತೆಗಳಿಗನುಗುಣವಾಗಿ ಸಾಲ ನೀಡುವುದರ ಮೂಲಕ ಅಂತಹ ಸದಸ್ಯರ ಕನಸುಗಳನ್ನುನನಸಾಗಿಸುವ ಪ್ರಯತ್ನ ಮಾಡುತ್ತಿದೆ. 2005 ರಲ್ಲಿ ಸಣ್ಣದಾಗಿ ಪ್ರಾರಂಭವಾದ ನಮ್ಮ  ಸಂಸ್ಥೆ ಇಂದು ದೊಡ್ಡದಾಗಿ ಬೆಳೆದು ಸಾವಿರಾರು ಸದಸ್ಯರಿಗೆ ಸಕಾಲದಲ್ಲಿ ಸಾಲ ನೀಡುವುದರ ಮೂಲಕ ಅವರ ಉದ್ಯೋಗ, ವ್ಯಾಪಾರ, ವಸತಿ, ಶಿಕ್ಷಣ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅವರು ಅಭಿವೃದ್ಧಿ ಹೊಂದುವಲ್ಲಿ ಸಹಕಾರಿಯಾಗಿದ್ದೇವೆ.

ಅದೇ ರೀತಿ ನಮ್ಮಲ್ಲಿ ತಮ್ಮ ಅಮೂಲ್ಯವಾದ ಉಳಿತಾಯದ ಹಣವನ್ನು ಬೇರೆ ಬೇರೆ ರೀತಿಯಲ್ಲಿ ಠೇವಣಿಯಲ್ಲಿ ತೊಡಗಿಸಿದ ಠೇವಣಿದಾರರ ಸೇವೆಗೆ ನಾವು ಬದ್ಧರಿದ್ದೇವೆ.  ಸಂಸ್ಥೆಯ ಪ್ರಾರಂಭದಿಂದ ಇಲ್ಲಿಯವರೆಗೂ ಠೇವಣಿದಾರರ ಸೇವೆಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಂಡಿದ್ದೇವೆ, ಮತ್ತು ನಾವು ನಮ್ಮ ಠೇವಣಿದಾರರಿಗೆ ಚಿರಋಣಿಗಳಾಗಿದ್ದೇವೆ.

ನಮ್ಮ ಸಂಸ್ಥೆ ಕೇವಲ ಹಣಕಾಸಿನ ಸೇವೆಯಲ್ಲದೆ ಇನ್ನಿತರ ಸಾಮಾಜಿಕ ಸೇವೆಗಳಲ್ಲಿಯೂ ತೊಡಗಿಸಿಕೊಂಡಿದೆ. ವ್ಯಾಪಾರಿ ಮಳಿಗೆ, ವಿಮಾ ಸೇವೆಗಳು, ಸರಕಾರಿ ಸೇವೆಗಳು ಹೀಗೆ ಹಲವು ರೀತಿಯಲ್ಲಿ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನರಿಗೆ ಸೇವೆ ನೀಡುವುದಲ್ಲದೆ ಹಲವರಿಗೆ ಉದ್ಯೋಗ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮ ಸಂಸ್ಥೆ ಮತ್ತು ಎಲ್ಲ ಅಂಗ ಸಂಸ್ಥೆಗಳಲ್ಲಿ ಕೆಲಸಮಾಡುವ ಉದ್ಯೋಗಿಗಳು ಸದಾ ನಗುಮುಖದ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ನಮಗೆ ಹೆಮ್ಮೆಯ ವಿಷಯ.

ಬನ್ನಿ, ನಮ್ಮಸಂಸ್ಥೆಯ ಸದಸ್ಯರಾಗಿ. ತಮಗೆ ಬೇಕಾದ ಸೇವೆಗಳನ್ನುಸಂಸ್ಥೆಯ ಸೇವಾನಿಯಮಗಳಿಗನುಗುಣವಾಗಿ ಒದಗಿಸಲು ನಾವು ಬದ್ಧರಾಗಿದ್ದೇವೆ.  ಸಹಕಾರದ ಮೂಲಕ ನಮ್ಮೆಲ್ಲರ ಪ್ರಾಮಾಣಿಕ ಕನಸುಗಳನ್ನು ನನಸಾಗಿಸಲು ಕೈಜೋಡಿಸೋಣ. ಆ ಮೂಲಕ ನಮ್ಮ ಈ ಸಂಸ್ಥೆ ಸಮರ್ಥವಾಗಿ ಮುಂದುವರಿದು ಇನ್ನೂ ಹೆಚ್ಚಿನ ಯಶಸ್ಸು ಕಾಣುವಂತಾಗಲು ಪ್ರಯತ್ನಿಸೋಣ.

ಜೈಹಿಂದ್ ! ಜೈ ಸಹಕಾರಿ !